ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ

ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ

prayer thumb

ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ 

 ದಿನಾಂಕ 19-10-2026 ನೇ ಸೋಮವಾರದಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರಿಗೆ ಗೌರವಾರ್ಪಣೆ 

ಕರ್ನಾಟಕದ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮ ಅಪೂರ್ವ ಸೇವೆ, ಸುಧೀರ್ಘ ಅನುಭವ, ಜ್ಞಾನ, ಬದ್ಧತೆ ಹಾಗೂ ವಿಶಿಷ್ಟ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಶ್ರೀಮತಿ ಉಷಾರಾಣಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವುದು ಬೆಳ್ತಂಗಡಿ ತಾಲೂಕು ಹಾಗೂ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ನಡಿಬೆಟ್ಟು ಗುತ್ತು ಎಂಬ ಜೈನ ಮನೆತನದಲ್ಲಿ ಜನಿಸಿದ ಅವರು, ಉತ್ತಮ ಜೀವನಮೌಲ್ಯಗಳು, ಶಿಸ್ತು, ಧಾರ್ಮಿಕ ಸಂಸ್ಕಾರ ಹಾಗೂ ಪರಿಶ್ರಮದ ಮೂಲಕ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಸಿವಿಲ್ ನ್ಯಾಯಾಧೀಶರಾಗಿ ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.

ಈ ಹಿನ್ನೆಲೆಯಲ್ಲಿ ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಸಮಾಜದ ಮೂವತ್ತೈದಕ್ಕೂ ಅಧಿಕ ಸದಸ್ಯರು ಶ್ರೀಮತಿ ಉಷಾರಾಣಿ ಅವರ ಸ್ವಗೃಹವಾದ ನಡಿಬೆಟ್ಟು ಗುತ್ತುವಿಗೆ ಭೇಟಿ ನೀಡಿ, ಅವರನ್ನು ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಉಷಾರಾಣಿ ಅವರು ತಮ್ಮ ಬಾಲ್ಯದ ಜೀವನ, ತಂದೆ-ತಾಯಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ, ಜೈನ ಧರ್ಮದ ಪಂಚಾಣುವ್ರತಗಳು, ಧಾರ್ಮಿಕ ತತ್ತ್ವಗಳು ಹಾಗೂ ಸಿದ್ಧಾಂತಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಮ್ಮ ಜೀವನಾನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿ ನೀಡಿದರು.

ಈ ಭೇಟಿಯು ಸಮಾಜದ ಸದಸ್ಯರಿಗೆ ಸಂತೋಷ ಹಾಗೂ ಹೆಮ್ಮೆಯ ಕ್ಷಣವಾಗಿದ್ದು, ಸಾಧನೆ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳ ಮಹತ್ವವನ್ನು ಮತ್ತೊಮ್ಮೆ ಸಾರಿತು. ಶ್ರೀಮತಿ ಉಷಾರಾಣಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ ಧೀಮತಿ ಜೈನ ಮಹಿಳಾ ಸಮಾಜವು ಅವರ ಮುಂದಿನ ಸೇವಾಜೀವನಕ್ಕೂ ಶುಭ ಹಾರೈಸಿತು.