ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ ಅಷ್ಟವಿಧಾರ್ಚನೆ ಪೂಜಾ ತರಬೇತಿ ಕಾರ್ಯಕ್ರಮ ಹಾಗೂ ನವೆಂಬರ್ ತಿಂಗಳ ಮಾಸಿಕ ಸಭೆಯ ವರದಿ
ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ ಅಷ್ಟವಿಧಾರ್ಚನೆ ಪೂಜಾ ತರಬೇತಿ ಕಾರ್ಯಕ್ರಮ ಹಾಗೂ ನವೆಂಬರ್ ತಿಂಗಳ ಮಾಸಿಕ ಸಭೆಯ ವರದಿ
ಶ್ರೀ ವೀತರಾಗಾಯ ನಮಃ
ಧೀಮತಿ ಜೈನ ಮಹಿಳಾ ಸಮಾಜ, ಉಜಿರೆ
ಅಷ್ಟವಿಧಾರ್ಚನೆ ಪೂಜಾ ತರಬೇತಿ ಕಾರ್ಯಕ್ರಮ ಹಾಗೂ ನವೆಂಬರ್ ತಿಂಗಳ ಮಾಸಿಕ ಸಭೆಯ ವರದಿ
ದಿನಾಂಕ: 07-11-2026, ಶನಿವಾರ
ಸ್ಥಳ: ರತ್ನತ್ರಯ ಸಭಾಂಗಣ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಉಜಿರೆ.
ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ವತಿಯಿಂದ ದಿನಾಂಕ 07-11-2026 ರಂದು ಮಕ್ಕಳಿಗಾಗಿ ಅಷ್ಟವಿಧಾರ್ಚನೆ ಪೂಜಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನವೆಂಬರ್ ತಿಂಗಳಲ್ಲಿ ಮಕ್ಕಳ ದಿನಾಚರಣೆ ಇರುವುದರಿಂದ ಮಕ್ಕಳಿಗೆ ಉಪಯುಕ್ತವಾದ ಹಾಗೂ ಧಾರ್ಮಿಕ ಸಂಸ್ಕಾರವನ್ನು ಬೆಳೆಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ಈ ಅಷ್ಟವಿಧಾರ್ಚನೆ ಪೂಜಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ಸೋನಿಯಾ ಯಶೋವರ್ಮ ಅವರ ಮಾರ್ಗದರ್ಶನದಲ್ಲಿ, ಶ್ರೀ ಅರಹಂತ ಇಂದ್ರರು, ಶಿಶಿಲ ಬಸದಿ ಇವರಿಂದ ಪೂಜಾ ವಿಧಿವಿಧಾನಗಳ ತರಬೇತಿಯು ಬಹಳ ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿ ನೆರವೇರಿತು. ಮಕ್ಕಳೊಂದಿಗೆ ಸಮಾಜದ ಸದಸ್ಯೆಯರೂ ಪೂಜೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿದರು. ಶ್ರೀಮತಿ ಸೌಮ್ಯ ಸುಭಾಷ್ ಧರ್ಮಸ್ಥಳ ಇವರು ತಮ್ಮ ಸುಮಧುರ ಸಂಗೀತದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಪೂಜೆಗೆ ಸುಮಧುರ ಸಂಗೀತದ ಮೂಲಕ ಸಹಕರಿಸಿದ ಶ್ರೀಮತಿ ಸೌಮ್ಯ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಮಕ್ಕಳು ಇಂದು ಕಲಿತ ಪೂಜಾ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶದಿಂದ ಧೀಮತಿ ಮಹಿಳಾ ಸಮಾಜ ಉಜಿರೆಯ ವತಿಯಿಂದ ನಮ್ಮ ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್ ಅವರು " ಸಂಕ್ಷಿಪ್ತ ಅಷ್ಟವಿಧಾರ್ಚನೆ ಪೂಜೆ" ಎಂಬ ಕಿರು ಪುಸ್ತಕವನ್ನು ಶಾಸ್ತ್ರದಾನವನ್ನಾಗಿ ನೀಡಿದರು.
ನಂತರ ನವೆಂಬರ್ ತಿಂಗಳ ಮಾಸಿಕ ಸಭೆಯು ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಶ್ರೀಮತಿ ಸುಪ್ರಿಯಾ ಶ್ರೀಕೀರ್ತಿ ಅವರು ಪ್ರಾರ್ಥನೆ ಹಾಡಿದರು. ಶ್ರೀಮತಿ ವರ್ಷಾ ಸತ್ಯಪ್ರಸಾದ್ ಅವರು ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿಯಾದ ಶ್ರೀಮತಿ ಸ್ಮೃತಿ ವಿನಯಚಂದ್ರ ಅವರು ಹಿಂದಿನ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು.
ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್ ಅವರು ಇಂದಿನ ಪೂಜಾ ಕಾರ್ಯಕ್ರಮ ಹಾಗೂ ಮಾಸಿಕ ಸಭೆಯಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮಾಜದ ಎಲ್ಲಾ ಸದಸ್ಯೆಯರ ಒಗ್ಗಟ್ಟು, ಸಹಕಾರ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವೆಂದು ತಿಳಿಸಿದರು. ಮುಂದಿನ ತಿಂಗಳುಗಳಲ್ಲಿ ಮಾಸಿಕ ಸಭೆಗಳನ್ನು ಯಾವ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆಸಬಹುದು, ಸಮಾಜಕ್ಕೆ ಉಪಯುಕ್ತವಾಗುವಂತಹ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಸದಸ್ಯೆಯರಿಂದ ಸಲಹೆ ಮತ್ತು ಸಹಕಾರವನ್ನು ಕೋರಿದರು. ಈ ಕುರಿತು ಸದಸ್ಯೆಯರೊಂದಿಗೆ ಚರ್ಚಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ಶಶಿಪ್ರಭ ಎಸ್. ಕಟಗೆ ಅವರು ನೆರವೇರಿಸಿದರು.
ಮಕ್ಕಳಲ್ಲಿ ಧಾರ್ಮಿಕ ಅರಿವು, ಸಂಸ್ಕಾರ ಹಾಗೂ ಪೂಜಾ ವಿಧಿವಿಧಾನಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಜೈ ಜಿನೇಂದ್ರ 🙏