ಧೀಮತಿ ಮಹಿಳಾ ಸಮಾಜ, ಉಜಿರೆ
ಧೀಮತಿ ಮಹಿಳಾ ಸಮಾಜ, ಉಜಿರೆ
ಧೀಮತಿ ಮಹಿಳಾ ಸಮಾಜ, ಉಜಿರೆ
ಆಗಸ್ಟ್ ತಿಂಗಳ ಮಾಸಿಕ ಸಭೆ ಹಾಗೂ ಕರಾವಳಿಯ ಜೈನ ಸಾಂಪ್ರದಾಯಿಕ ಆಹಾರೋತ್ಸವ – ವರದಿ
ದಿನಾಂಕ: 22-08-2026
ಸಮಯ: ಸಂಜೆ 4:00 ಗಂಟೆ
ಸ್ಥಳ: ಎಸ್.ಡಿ.ಎಂ. ಪದವಿಪೂರ್ವ ಕಾಲೇಜು, ರತ್ನತ್ರಯ ಸಭಾಂಗಣ, ಉಜಿರೆ
ಶ್ರೀ ವೀತರಾಗಾಯ ನಮಃ 🙏
ಧೀಮತಿ ಮಹಿಳಾ ಸಮಾಜ, ಉಜಿರೆ ವತಿಯಿಂದ ಆಗಸ್ಟ್ ತಿಂಗಳ ಮಾಸಿಕ ಸಭೆಯ ಅಂಗವಾಗಿ “ಆಗಸ್ಟ್ ತಿಂಗಳ ಮಾಸಿಕ ಸಭೆ ಮತ್ತು ಕರಾವಳಿಯ ಜೈನ ಸಾಂಪ್ರದಾಯಿಕ ಆಹಾರೋತ್ಸವ” ಕಾರ್ಯಕ್ರಮವನ್ನು ರತ್ನತ್ರಯ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವು ಶ್ರೀಮತಿ ಸುರೇಖಾ ಸಂತೋಷ್ ಹಾಗೂ ಶ್ರೀಮತಿ ವರ್ಷಾ ಸತ್ಯಪ್ರಸಾದ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀಮತಿ ಕವನಶ್ರೀ ಅವರು ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು. ಹಾಗೂ ಶ್ರೀಮತಿ ಧನಲಕ್ಷ್ಮಿಯವರು ಅತಿಥಿಗಳನ್ನು ಪರಿಚಯಿಸಿದರು. ಕರಾವಳಿಯ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ವೈಶಿಷ್ಟ್ಯವನ್ನು ಪರಿಚಯಿಸುವ ಉದ್ದೇಶದಿಂದ ಶ್ಯಾವಿಗೆ ಒತ್ತುವ ವಿಶೇಷ ಚಟುವಟಿಕೆಯ ಮೂಲಕ ಆಹಾರೋತ್ಸವಕ್ಕೆ ಶುಭಾರಂಭ ನೀಡಲಾಯಿತು.
ಮುಖ್ಯ ಅತಿಥಿಗಳಾದ ಶ್ರೀಮತಿ ರಾಜಶ್ರೀ ಹೆಗ್ಡೆ ಅವರು ತಮ್ಮ ಮಾತುಗಳಲ್ಲಿ ಆಹಾರವನ್ನು ಕೇವಲ ಹೊಟ್ಟೆ ತುಂಬಿಸುವ ಸಾಧನವಾಗಿ ನೋಡದೆ, “ಆಹಾರವೇ ಔಷಧಿ” ಎಂಬ ಮನೋಭಾವದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು. ಸ್ವಚ್ಛತೆ ಹಾಗೂ ಉತ್ತಮ ಮನೋಭಾವದಿಂದ ತಯಾರಿಸಿದ ಆಹಾರವೇ ಆರೋಗ್ಯಕ್ಕೆ ಪೂರಕವಾಗುತ್ತದೆ ಎಂದರು. ಇಂದಿನ ದಿನಗಳಲ್ಲಿ ತರಕಾರಿ, ಹಣ್ಣು, ಬೇಳೆ, ಧಾನ್ಯ ಸೇರಿದಂತೆ ಅನೇಕ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಇರುವ ಸಾಧ್ಯತೆಯಿರುವುದರಿಂದ ಆಹಾರದ ಆಯ್ಕೆಯಲ್ಲಿ ಜಾಗರೂಕರಾಗಬೇಕು ಹಾಗೂ ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ಮನೆಯಲ್ಲಿಯೇ ಕಿಚನ್ ಗಾರ್ಡನ್ ಬೆಳೆಸುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ, ಸಮಾಜದಂತಹ ಸಾರ್ವಜನಿಕ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಪರಸ್ಪರ ಬಾಂಧವ್ಯ, ಸ್ನೇಹ ಹಾಗೂ ಸೌಹಾರ್ದತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ಇವರು ಹಿಂದಿನ ಮಾಸಿಕ ಸಭೆ ಹಾಗೂ ಇತ್ತೀಚೆಗೆ ನಡೆದ ಸ್ವಾತಂತ್ರೋತ್ಸವ ಆಚರಣೆಯ ವರದಿಯನ್ನು ಮಂಡಿಸಿದರು.
ಗೌರವಾಧ್ಯಕ್ಷರಾದ ಶ್ರೀಮತಿ ಸೋನಿಯಾ ವರ್ಮಾ ಅವರು ತಮ್ಮ ಮಾರ್ಗದರ್ಶನದ ಮಾತುಗಳಲ್ಲಿ ಆಹಾರವನ್ನು ಎಂದಿಗೂ ವ್ಯರ್ಥ ಮಾಡಬಾರದು; ಆಹಾರದ ಮೌಲ್ಯವನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು. ಒಂದು ಆಹಾರ ಧಾನ್ಯ ನಮ್ಮ ತಟ್ಟೆಗೆ ಬರುವವರೆಗೆ ರೈತರು ಬೀಜದ ಆಯ್ಕೆ, ಹೊಲದ ನಿರ್ವಹಣೆ, ಕಳೆ ತೆಗೆಯುವುದು, ನೀರುಣಿಸುವುದು ಹಾಗೂ ಬೆಳೆ ಸಂರಕ್ಷಿಸುವುದು ಸೇರಿದಂತೆ ಹಗಲು-ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ. ಆದ್ದರಿಂದ ರೈತರ ಪರಿಶ್ರಮವನ್ನು ಗೌರವಿಸುವ ನಿಟ್ಟಿನಲ್ಲಿ ಆಹಾರವನ್ನು ವ್ಯರ್ಥ ಮಾಡದೆ, ನಮಗೆ ಬೇಕಾದಷ್ಟು ಮಾತ್ರ ತೆಗೆದುಕೊಂಡು ಸೇವಿಸಬೇಕು ಎಂದು ಅವರು ಮನಮುಟ್ಟುವಂತೆ ತಿಳಿಸಿದರು.
ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರವೀಣ ಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿದರು. ಕರಾವಳಿ ಪ್ರದೇಶವು ಸಸ್ಯಾಧಾರಿತ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಪ್ರಸಿದ್ಧವಾಗಿದ್ದು, ಸಸ್ಯದ ಬೇರು, ಕಾಂಡ, ಎಲೆ, ಹೂವು, ಹಣ್ಣು ಸೇರಿದಂತೆ ವಿವಿಧ ಭಾಗಗಳನ್ನು ಆಹಾರವಾಗಿ ಬಳಸುವ ವಿಶಿಷ್ಟ ಪರಂಪರೆ ನಮ್ಮಲ್ಲಿದೆ ಎಂದು ವಿವರಿಸಿದರು. ಇಂದಿನ ಆಧುನಿಕ ಆಹಾರ ಪದ್ಧತಿಗಿಂತ ನಮ್ಮ ಹಳೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಹೊಂದಿರುವ ಸಾಧ್ಯವಿಲ್ಲ ಹೆಚ್ಚು ಆರೋಗ್ಯಕರ ಹಾಗೂ ಪೌಷ್ಟಿಕವಾಗಿದೆ ಎಂಬುದನ್ನು ಅವರು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಪಾಕತಜ್ಞೆ ಶ್ರೀಮತಿ ಸುಧಾಮಣಿ ಅವರನ್ನು ಅವರ ಸೇವೆ ಹಾಗೂ ಪಾಕಕಲೆಯ ಕೊಡುಗೆಗಾಗಿ ಸನ್ಮಾನಿಸಲಾಯಿತು. ಅವರ ಪರಿಚಯವನ್ನು ಶ್ರೀಮತಿ ರಾಜಶ್ರೀ ಪ್ರಸನ್ನ ಕುಮಾರ್ ಅವರು ನಡೆಸಿ, ಸನ್ಮಾನಿತರ ಬಗ್ಗೆ ಒಂದು ಹನಿಗವನವನ್ನು ರಚಿಸಿ ವಾಚಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಸುಧಾಮಣಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇದರೊಂದಿಗೆ ಕರಾವಳಿಯ ಸಾಂಪ್ರದಾಯಿಕ ಎದುರು ಕಥೆಗಳ ಮೂಲಕ ಶ್ರೀಮತಿ ಚಂಪಾ ಜೆ. ಪೂವಣಿ ಅವರು ಸಭಿಕರನ್ನು ರಂಜಿಸಿದರು. ಕಾರ್ಯಕ್ರಮಕ್ಕೆ ಹಾಸ್ಯ, ಚಾತುರ್ಯ ಹಾಗೂ ಮನರಂಜನೆಯ ಸೊಗಡನ್ನು ತುಂಬಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. “Star of the Day” ಕಾರ್ಯಕ್ರಮವೂ ವಿಶೇಷ ಉತ್ಸಾಹ ಮೂಡಿಸಿತು.
ಸಭೆಯ ಅಂತಿಮ ಹಂತದಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಸೋನಿಯಾ ವರ್ಮಾ ಹಾಗೂ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರವೀಣ ಕುಮಾರ್ ಅವರು ಸಮಾಜದ ಮುಂದಿನ ಚಟುವಟಿಕೆಗಳಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಮಾತುಗಳನ್ನು ನೀಡಿದರು. ಶ್ರೀಮತಿ ಶಕುಂತಲಾ ಜಯಕೀರ್ತಿಯವರು, ವಂದನಾರ್ಪಣೆಯೊಂದಿಗೆ ಎಲ್ಲರ ಸಹಕಾರವನ್ನು ಸ್ಮರಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ತದನಂತರ ಸಮಾಜದ ಸದಸ್ಯೆಯರು ತಮ್ಮ ತಮ್ಮಮನೆಗಳಲ್ಲಿ ತಯಾರಿಸಿ ತಂದಿರುವ ಕರಾವಳಿಯ ಸಾಂಪ್ರದಾಯಿಕ ಸರಿ ಸುಮಾರು 44 ರೀತಿಯ ತಿನಿಸುಗಳನ್ನು ಎಲ್ಲರಿಗೆ ಉಣಬಡಿಸಿದರು.
ಒಟ್ಟಾರೆಯಾಗಿ, ಕರಾವಳಿಯ ಜೈನ ಸಾಂಪ್ರದಾಯಿಕ ಆಹಾರ ಪದ್ಧತಿ, ಆರೋಗ್ಯಕರ ಆಹಾರ, ಆಹಾರದ ಮೌಲ್ಯ, ರೈತರ ಪರಿಶ್ರಮ ಹಾಗೂ ಸಮಾಜದ ಸೌಹಾರ್ದತೆಯ ಮಹತ್ವವನ್ನು ಸಾರಿದ ಇಂದಿನ ಮಾಸಿಕ ಸಭೆ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
ಜೈ ಜಿನೇಂದ್ರ 🙏